ಇಂಡೋ - ಬ್ಯಾಕ್ಟ್ರಿಯನ್ನರು

ಅಲೆಕ್ಸಾಂಡರನ ಅನಂತರ ಪ್ರಾಬಲ್ಯಕ್ಕೆ ಬಂದ ಒಂದು ಅರಸುಮನೆತನ. ಅಲೆಕ್ಸಾಂಡರ್ ನಿರ್ಮಿಸಿದ ವಿಶಾಲ ಸಾಮ್ರಾಜ್ಯವನ್ನು (ಮ್ಯಾಸಿಡೋನಿಯ, ಸಿರಿಯ, ಬ್ಯಾಕ್ಟ್ರಿಯ, ಪಾರ್ಥಿಯ, ಆಫ್‍ಘನಿಸ್ತಾನ ಮತ್ತು ವಾಯುವ್ಯ ಭಾರತ) ಸ್ವಲ್ಪ ಕಾಲದವರೆಗೆ ಸೆಲ್ಯೂಕಸ್ ಬಹು ದಕ್ಷತೆಯಿಂದ ಆಳಿದ. ಕ್ರಮೇಣ ಕೆಲವು ಭಾಗಗಳನ್ನು (ಆಫ್‍ಘನಿಸ್ತಾನ ಮತ್ತು ವಾಯವ್ಯ ಭಾರತ) ಆತ ಚಂದ್ರಗುಪ್ತಮೌರ್ಯನಿಗೆ ಬಿಟ್ಟುಕೊಡಬೇಕಾಯಿತು. ಸೆಲ್ಯೂಕಸ್‍ನ ಮೊಮ್ಮಗನಾದ ಎರಡನೆಯ ಆಂಟಿಯೋಕಸ್ಸನ ಕಾಲಕ್ಕೆ ಸಾಮ್ರಾಜ್ಯ ಕುಸಿಯತೊಡಗಿತು. ಅವನ ಆಳ್ವಿಕೆ ಮುಗಿಯುವಷ್ಟರಲ್ಲಿ ಡಿಯೊಡೊಟಸ್ ಎಂಬುವನ ನೇತೃತ್ವದಲ್ಲಿ ಬ್ಯಾಕ್ಟ್ರಿಯನ್ನರೂ ಅರ್ಸಕಸ್ ಎಂಬುವನ ನಾಯಕತ್ವದಲ್ಲಿ ಪಾರ್ಥಿಯನ್ನರೂ ಸ್ವತಂತ್ರರಾಜ್ಯಗಳನ್ನು ನಿರ್ಮಿಸಲು ಸಿದ್ಧರಾದರು. ಮೌರ್ಯಸಾಮ್ರಾಜ್ಯ ಮುರಿದು ಬಿದ್ದುದರಿಂದ ಭಾರತದಲ್ಲಿ ಬಲಿಷ್ಠರಾದ ರಾಜರುಗಳಾರೂ ಇರಲಿಲ್ಲ. ಇಂಥ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಬ್ಯಾಕ್ಟ್ರಿಯ ಮತ್ತು ಪಾರ್ಥಿಯಾದ ಗ್ರೀಕ್ ರಾಜರು ತಮ್ಮ ಆಕ್ರಮಣಗಳನ್ನು ಆಗ್ನೇಯದ ಕಡೆ ಮುಂದುವರಿಸಿದರು. ಅವರು ಭಾರತದ ವಾಯುವ್ಯಭಾಗದಲ್ಲಿ ಇಂಡೋ-ಗ್ರೀಕ್ ಅಥವಾ ಇಂಡೋ-ಬ್ಯಾಕ್ಟ್ರಿಯನ್ ಮತ್ತು ಇಂಡೋ-ಪಾರ್ಥಿಯನ್ ರಾಜ್ಯಗಳನ್ನು ಸ್ಥಾಪಿಸಿದರು.
	
ಹಿಂದೂಕುಷ್‍ನ ಆಚೆ ಇರುವ ಬ್ಯಾಕ್ಟ್ರಿಯ ಸಂಪದ್ಭರಿತವಾಗಿದ್ದು ಅಲೆಕ್ಸಾಂಡರನ ಕಾಲದಲ್ಲಿ ಪ್ರಮುಖವಾದ ಸತ್ರಪಿಯಾಗಿತ್ತು. ಸೆಲ್ಯೂಕಸನ ಕಾಲದಲ್ಲಿ ಅದು ಪೂರ್ಣವಾಗಿ ಗ್ರೀಕ್ ಸಂಸ್ಕøತಿಯ ಕೇಂದ್ರವಾಯಿತು. ಕ್ರಿ.ಪೂ. 252ರಲ್ಲಿ ಅದರ ಆಡಳಿತಾಧಿಕಾರಿಯಾದ ಡಯೋಡಟಸ್ ಸಮಯ ನೋಡಿ ಸ್ವಾತಂತ್ರ್ಯ ಪತಾಕೆ ಹಾರಿಸಿದ. ಅವನ ಉತ್ತರಾಧಿಕಾರಿಗಳಾದ ಡಯೋಡಟಸ್ II ಮತ್ತು ಯೂಕಿಡಿಮಾಸ್ ತಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಮಧ್ಯ ಏಷ್ಯಾದಲ್ಲಿ ಕಾರ್ಯನಿರತರಾಗಿದ್ದರು. ಆದರೆ ನಾಲ್ಕನೆಯ ದೊರೆಯಾದ ಡೆಮಿಟ್ರಿಯಸ್ ಭಾರತದ ಮೇಲೆ ದಾಳಿ ಮಾಡಿ, ವಾಯುವ್ಯಭಾಗದಲ್ಲಿ ಇಂಡೋ-ಬ್ಯಾಕ್ಟ್ರಿಯನ್ ರಾಜ್ಯವನ್ನು ಸ್ಥಾಪಿಸಿ, ಸಕಲ (ಸಯಾಲ್ ಕೋಟೆ) ಎಂಬುದನ್ನು ರಾಜಧಾನಿಯನ್ನಾಗಿ ಮಾಡಿಕೊಂಡ.

	ಡೆಮಿಟ್ರಿಯಸ್ (ಕ್ರಿ.ಪೂ 200-175): ತನ್ನ ಮಾವನಾದ ಸಿರಿಯಾದ ಆಂಟಿ ಬೋಕಸ್ಸನ ಹಾದಿಯಲ್ಲೇ ನಡೆಯಬೇಕೆಂಬ ಉದ್ದೇಶದಿಂದ ಈತ ದಂಡಯಾತ್ರೆ ಹೊರಟು ಭಾರತದ ಸ್ವಲ್ಪಭಾಗವನ್ನು ವಶಪಡಿಸಿಕೊಂಡ. ಬಲಿಷ್ಠನಾದ ದೊರೆಯೊಬ್ಬ ಇಲ್ಲದ್ದರಿಂದ ಭಾರತ ಛಿದ್ರಗೊಂಡು ದುಃಸ್ಥಿತಿಯಲ್ಲಿರುವುದೆಂದೂ ತನ್ನ ಕಾರ್ಯಸಾಧನೆಗೆ ಇದೇ ತಕ್ಕಸಮಯವೆಂದೂ ಭಾವಿಸಿದ ಈತ ಭಾರತದ ಮೇಲೆ ಮತ್ತೊಮ್ಮೆ ದಾಳಿಮಾಡಲು ನಿಶ್ಚಯಿಸಿದ. ಅಲೆಕ್ಸಾಂಡರನಂತೆ ತಾನೂ ವಿಶ್ವವಿಖ್ಯಾತನಾಗಬೇಕೆಂದೂ ಭಾರತದಲ್ಲಿರುವ ಐಶ್ವರ್ಯವನ್ನು ಲೂಟಿಹೊಡೆಯಬೇಕೆಂದೂ ಈತ ಇಚ್ಛಿಸಿದ. ಖರೋಷ್ಠಿ ಮತ್ತು ಗ್ರೀಕ್ ಭಾಷೆಗಳಲ್ಲಿರುವ ನಾಣ್ಯಗಳ ಆಧಾರದ ಮೇಲೆ ಈತ ಆಫ್‍ಘಾನಿಸ್ತಾನದಲ್ಲೆಲ್ಲ ದಾಳಿ ಮಾಡಿ, ಭಾರತದ ವಾಯುವ್ಯದಲ್ಲಿದ್ದ ಕೆಲವು ರಾಜ್ಯಗಳನ್ನು ಕಟ್ಟಿಕೊಂಡು ಭಾರತೀಯರ ರಾಜನೆಂಬ ಬಿರುದನ್ನು ಪಡೆದನೆಂದು ಹೇಳಬಹುದು. ಇವನ ಆಳ್ವಿಕೆಯ ಕೊನೆಯ ಹೊತ್ತಿಗೆ ಬಾಲ್ಕ್ ಎಂಬ ಪ್ರದೇಶ ದಂಗೆ ಎದ್ದುದರಿಂದ ಈತ ತನ್ನ ಸಾಮ್ರಾಜ್ಯದ ಕೆಲವು ಭಾಗಗಳನ್ನು ಕಳೆದುಕೊಳ್ಳಬೇಕಾಯಿತು.
	
ಭಾರತದ ಆಕ್ರಮಿತ ಪ್ರದೇಶಗಳನ್ನು ಕ್ರೋಢೀಕರಿಸುವ ಕಾರ್ಯದಲ್ಲಿ ಡೆಮಿಟ್ರಿಯಸ್ ನಿರತನಾಗಿದ್ದಾಗ ಯೂಕ್ರಟೈಡಿಸ್ ಬಾಲ್ಕ್‍ನಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿದ. ಅನಂತರ ಡೆಮಿಟ್ರಿಯಸ್‍ನ ಭಾರತದ ನೆಲೆಗಳನ್ನು ಆಕ್ರಮಿಸಿಕೊಂಡ ಎಂಬುದಾಗಿ ಊಹಿಸಲಾಗಿದೆ. ಅವನ ಮರಣಾನಂತರ ಡೆಮಿಟ್ರಿಯಸ್ ಮತ್ತು ಯೂಕ್ರಡೈಡ್ಸ್ ಅವರ ಬಂಧುಗಳಾದ ಅನೇಕ ಗ್ರೀಕರ ರಾಜರುಗಳು ಉತ್ತರ ಭಾರತವನ್ನು ತಮ್ಮ ಇಷ್ಟಾನುಸಾರ ಹಂಚಿಕೊಂಡರೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
	
ಕ್ರಿ.ಪೂ. 130ರ ಅನಂತರ ಬ್ಯಾಕ್ಟ್ರಿಯನ್ನರ ರಾಜ್ಯ ಕ್ಷೀಣ ದೆಸೆಗೆ ಬಂತು. 				
(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ